ಸೂಳೆಕೆರೆ
	ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಚನ್ನಗಿರಿಯ ಉತ್ತರಕ್ಕೆ 20 ಕಿಮೀ ದೂರದಲ್ಲಿರುವ ಒಂದು ಕೆರೆ. ಶಾಂತಿಸಾಗರವೆಂದು ಕರೆಯುವ ಈ ಕೆರೆಯ ಸುತ್ತಳತೆ 64 ಕಿಮೀಗಳು. ಈ ಕೆರೆ ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ಸುಂದರ ಜಲಾಶಯಗಳಲ್ಲೊಂದು. ಈ ಕೆರೆಯನ್ನು ಸ್ವರ್ಗವತಿ ಪಟ್ಟಣದ ದೊರೆ ವಿಕ್ರಮರಾಯನ ಮಗಳು ಶಾಂತವ್ವ ಕಟ್ಟಿಸಿದಳೆಂದು ಪ್ರತೀತಿ. ಶಾಂತವ್ವ ಒಬ್ಬ ದೇವತೆಯೊಡನೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕಾಗಿ, ಆಕೆಯನ್ನು ಸೂಳೆ ಎಂದು ರಾಜ ವಿಕ್ರಮರಾಯ ದೂಷಿಸಿದನಂತೆ. ತಾನು ಮಾಡಿದ ಪಾಪದ ಪರಿಹಾರಕ್ಕಾಗಿ ಶಾಂತವ್ವ ಈ ಕೆರೆಯನ್ನು ಕಟ್ಟಿಸಿದಳೆಂದೂ ಸ್ವರ್ಗವತಿ ಪಟ್ಟಣ ಈ ಕೆರೆಯಲ್ಲಿ ಮುಳುಗಡೆ ಆಯಿತೆಂದೂ ಕಥೆ. 11 ಅಥವಾ 12ನೆಯ ಶತಮಾನದಲ್ಲಿ ಹಿರೇಹಳ್ಳ ಮತ್ತು ಸೊಪ್ಪಿನಹಳ್ಳಗಳಿಗೆ ಅಡ್ಡಲಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ.

	ಬೆಟ್ಟಗಳ ನಡುವಿನ ತಗ್ಗು ಪ್ರದೇಶದ ನೀರನ್ನು ಕಾಲುವೆಗಳ ಮೂಲಕ ಈ ಕೆರೆಗೆ ಹರಿಸಲಾಗುತ್ತದೆ. ಮುಖ್ಯ ಕಾಲುವೆಗೆ ಹರಿದ್ರಾವತಿ ಅಥವಾ ಹರಿದ್ರ ಎಂದು ಹೆಸರು. ಇದಕ್ಕೆ ಎರಡು ನಾಲೆಗಳಿದ್ದು ಉತ್ತರದ ನಾಲೆಗೆ ಸಿದ್ಧನಾಲೆ ಎಂದೂ ದಕ್ಷಿಣದ ನಾಲೆಗೆ ಬಸವನಾಲೆ ಎಂದೂ ಹೆಸರು. ಇದರ ಅಚ್ಚುಕಟ್ಟು ಪ್ರದೇಶ 1,792.5 ಹೆಕ್ಟೇರ್‍ಗಳು. ಈ ಕೆರೆಯ ಕಾಲುವೆಗಳನ್ನೂ ತೂಬುಗಳನ್ನೂ ದುರಸ್ತು ಮಾಡಿ, ಮರದ ಬಿರಡೆಗಳಿಗೆ ಬದಲಾಗಿ ಕಬ್ಬಿಣದ ಬಿರಡೆಗಳನ್ನು ಹಾಕಲಾಗಿದೆ. 

	ಕೆರೆಯ ಪೂರ್ವದ ಕೊನೆಯಲ್ಲಿ ಸಿದ್ಧೇಶ್ವರ ದೇವಾಲಯವಿದೆ. ಇದರಲ್ಲಿ ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿವೆ. ಮಹಾದ್ವಾರದ ಒಳಗೆ ಜಗಲಿ ಇದೆ. ಈ ದೇವಾಲಯದಲ್ಲಿ ಹೊಯ್ಸಳ ಮತ್ತು ಕೆಳದಿ ಅರಸರ ಕಾಲದ ವಾಸ್ತು ರಚನೆಗಳಿವೆ. ಈ ಮುಖ್ಯ ದೇವಾಲಯದ ನೈಋತ್ಯಕ್ಕೆ ದುರ್ಗಿ ಗುಡಿ ಇದೆ. ಶಿವರಾತ್ರಿಯ ಸಮಯದಲ್ಲಿ  ಸಿದ್ಧೇಶ್ವರ ದೇವಾಲಯದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಸ್ಥಳದಲ್ಲಿ ಒಂದು ಮೀನುಗಾರಿಕೆ ಕೇಂದ್ರವಿದೆ.	
					
		(ಎಮ್.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ